ಶ್ರೀ ಹಿಮವದ್ ಗೋಪಾಲಸ್ವಾಮಿ

ಮೈಸೂರಿನ ದಕ್ಷಿಣಕ್ಕೆ ಸುಮಾರು 80 ಕಿ. ಮೀ. ದೂರದಲ್ಲಿದೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ. ಊಟಿ ಹೆದ್ದಾರಿಯ ಅಂಚಿನಲ್ಲಿರುವ ಈ ಪ್ರಕೃತಿ ಸೌಂದರ್ಯ ತಾಣ ಪ್ರವಾಸಿಗರ, ಚಾರಣಪ್ರಿಯರ ಸ್ವರ್ಗವಾಗಿಯೂ ಖ್ಯಾತಿಗೊಂಡಿದೆ. ಪ್ರಚಾರದಿಂದ ಸ್ವಲ್ಪ ದೂರ ಉಳಿದಿದ್ದರೂ ದಟ್ಟವಾಗಿರುವ ಪ್ರಾಕೃತಿಕ ವೈಭವ, ಹಸಿರಿನ ಸಿರಿಸಂಪತ್ತಿನ ನಡುವೆ ಬೃಹದಾಕಾರವಾಗಿ ಚಾಚಿರುವ ಬಂಡೆಕಲ್ಲುಗಳು, ಕೊಳಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳ ನಿನಾದ, ಮೈಸೋಕುವ ತಂಗಾಳಿಯ ಹಿತಾನುಭವ, ಆಗಸದ ಮರೆಯಿಂದ ಚಿತ್ರವಿಚಿತ್ರವಾಗಿ ಕಾಣುವ ಮೋಡಗಳ ಆಟ. ಸ್ವರ್ಗವೇ ಕೈವಶವಾದಂಥ ಅವಿಸ್ಮರಣೀಯ ಅನುಭವ ಇಲ್ಲಿಗೆ ತೆರಳಿದರೆ ಸಿಗದಿರದು. ಪ್ರಕೃತಿಯ ಜೊತೆ ಒಂದಾಗಿ ಫೋಟೋ ತೆಗೆಸಿಕೊಳ್ಳಲು ಇಲ್ಲಿನ ಪ್ರಾಕೃತಿಕ ಸೊಬಗು ಹೇಳಿ ಮಾಡಿಸಿದ ತಾಣವಾಗಿದೆ.  ಬೆಟ್ಟದ ಮಡಿಲಲ್ಲಿ ಕಾಡಿನ ಗರ್ಭದಲ್ಲಿ ಲೀನವಾಗಿ ಬಿಡಬೇಕೆಂಬ ಉತ್ಕಟ ಬಯಕೆಯಾಗುವುದಂತೂ ಸಹಜ.

ದಕ್ಷಿಣ ಗೋವರ್ಧನಗಿರಿಗೆ ಇನ್ನೊಂದು ಹೆಸರು ಕಮಲಾಚಲ. ಈ ಗಿರಿಕ್ಷೇತ್ರದಲ್ಲಿಯೇ ಶ್ರೀ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವದು ಈ ಕ್ಷೇತ್ರದ ಮಹಿಮೆ ಸಂಕ್ಷಿಪ್ತವಾಗಿ ಹೀಗಿದೆ.

ದ್ವಾಪರ ಯುಗದಲ್ಲಿ ಹಿಮವಂತ ಪರ್ವತನ ಕುಮಾರಿಯಾದ ಗಿರಿಜೆಯ ಕಲ್ಯಾಣ ಮಹೋತ್ಸವಕ್ಕೆ ಉತ್ತರ ದೇಶದ ಕಾಶೀ ಪಟ್ಟಣಕ್ಕೆ ಮುವ್ವತ್ತ ಮೂರು ಕೋಟಿ ದೇವತೆಗಳು ಬ್ರಹ್ಮ ರುದ್ರಾದಿಗಳು, ವ್ಯಾಸಪರಾಶರಾದಿ ಮುಖ್ಯವಾದ ಮಹಾ ಋಷಿಗಳು ಆಗಮಿಸಿದ್ದರು.

ಸಕಲ ದೇವಾನುದೇವಾದಿ ದೇವತೆಗಳೆಲ್ಲರ ಆಗಮನದ ಕಾರಣ ಭೂ ದೇವಿಯ ಭಾರ ಹೆಚ್ಚಾಗಿ ಈ ಭಾರ ಸಹಿಸಲಾಗದೆ ಭೂಮಿಯು ಪಾತಾಳಕ್ಕೆ ಇಳಿದಿದ್ದನ್ನು ಬ್ರಹ್ಮ ರುದ್ರಾದಿ ಸಕಲ ದೇವತೆಗಳು ಕಂಡು ಆಲೋಚನೆ ಮಾಡಿ ಈ ಭಾರಕ್ಕೆ ಸಮನಾದ ಮಹಾ ಪುರುಷನನ್ನು ದಕ್ಷಿಣ ದೇಶಕ್ಕೆ ಕಳುಹಿಸಿ ಭೂಮಿಯನ್ನು ಸಮ ತೂಕಕ್ಕೆ ತರಲು ನಿರ್ಧರಿಸಿ, ಅಗಸ್ತ್ಯ ಮಹಾ ಋಷಿಗಳು ಅರ್ಹರು ಎಂದು ನಂಬಿ ಅಗಸ್ತ್ಯ ಮಹಾ ಋಷಿಗಳನ್ನು ಪ್ರಾರ್ಥನೆ ಮಾಡಿ, ನೀವು ದಕ್ಷಿಣ ದೇಶಕ್ಕೆ ಹೋಗಿ ಅಲ್ಲಿ ವಾಸ ಮಾಡಬೇಕೆಂಧು ಕೋರಿದ ಮೇರೆ ಮಹಾ ಋಷಿಯವರು ದೇವಾನುದೇವತೆಗಳ ಅನುಮತಿ ಪಡೆದು ಗಂಗಾದಿ ಸರ್ವ ತೀರ್ಥಗಳನ್ನು ಕಮಂಡಲದಲ್ಲಿ ಸಂಗ್ರಹಿಸಿಕೊಂಡು ಹೊರಡಲುವಾದಾಗ ದೇವಾನುದೇವತೆಗಳು ಇನ್ನೊಂದು ಪ್ರಾರ್ಥನೆಯನ್ನು ಅವರ ಮುಂದಿಟ್ಟರು.

ವಿಂದ್ಯನಿಗೂ ಮಹಾ ಮೇರು ಪರ್ವತ ರಾಜನಿಗೂ ನಾನೇ ಹೆಚ್ಚು-ತಾನೇ ಹೆಚ್ಚು ಎಂಬ ವಿವಾದ ಉಂಟಾಗಿದ್ದು, ಇದರಿಂದ ಕೋಪಿತನಾಗಿರುವ ವಿಂದ್ಯನು ಆಕಾಶಕ್ಕೆ ಬೆಳೇದು ಸೂರ್ಯಗತಿ ಮತ್ತು ಚಂದ್ರನ ಗತಿಯನ್ನು ತಡೆದಿರುವ ಕಾರಣ ಉದಯಾಸ್ತಮಯಗಳು ಕಾಣದೆ ಅಂಧಾಕಾರವಾಗಿದೆ. ಈ ನಿಮ್ಮ ಶಿಷ್ಯನಾದ ವಿಂದ್ಯನ ದೆಸೆಯಿಂದ ಬಂದಿರುವ ಉಪದ್ರವವನ್ನು ಪರಿಹರಿಸಿ ನಮ್ಮನ್ನು ರಕ್ಷಿಸಬೇಕೆಂಧು ಕೇಳಕೊಂಡ ಕಾರಣ ಅಗಸ್ತ್ಯ ಮಹಾಋಷಿಗಳು ಕಾಶಿ ಪಟ್ಟಣದಿಂದ ಹೊರಟು ದಕ್ಷಿಣ ದೇಶಕ್ಕೆ ಬರುವ ಮಾರ್ಗದಲ್ಲಿ ವಿಂಧ್ಯನ ಬಳಿ ಬಂದಾಗ ವಿಂದ್ಯನು ತನ್ನ ಗುರುಗಳಾದ ಅಗಸ್ತ್ಯ ಮಹಾಋಷಿಗಳು ಬರುವುದನ್ನು ಕಂಡು ನಮಸ್ಕರಿಸಲಾಗಿ ಋಷಿ ವರ್ಯರು ಹಸನ್ಮುಖರಾಗಿ ನಾವು ದಕ್ಷಿಣ ದೇಶಕ್ಕೆ ಹೋಗಿ ಬರುವವರೆಗೂ ಇದೇ ರೀತಿ ಇರಬೇಕೆಂದು ಅಪ್ಪಣೆ ಕೊಟ್ಟು ವಿಂಧ್ಯನು ಬೆಳೆಯುವುದನ್ನು ನಿಲ್ಲಿಸಿ ಉತ್ತರ ಗೋವರ್ಧನನ ಪರ್ವತಕ್ಕೆ ಬಂದು ಶ್ರೀ ಕೃಷ್ಣನನ್ನು ಪ್ರಾರ್ಥಿಸಿ, ನಾನು ದಕ್ಷಿಣ ದೇಶಕ್ಕೆ ದೇವತಾ ಕಾರ್ಯಕ್ಕೆ ಹೋಗುತ್ತಿದ್ದೇನೆ. ನೀವು ರುಕ್ಮಿಣಿ ಸತ್ಯಭಾಮ ಸಮೇತರಾಗಿ ಬಿಜಯಂಗೈಯ್ಯಬೇಕೆಂದು ಪ್ರಾರ್ಥಿಸುತ್ತಾರೆ. ಶ್ರೀ ಕೃಷ್ಣರು ಋಷಿವರ್ಯರ ಕೋರಿಕೆಯನ್ನು ಮನ್ನಿಸಿ ನೀವು ಮುಂದೆ ಹೋಗಿರಿ ಎಂದು ಮಾತು ಕೊಡುತ್ತಾರೆ.

ಅಗಸ್ತ್ಯ ಮಹಾ ಋಷಿಗಳು ಸ್ವಾಮಿಯ ಅಪ್ಪಣೆ ಪಡೆದು ಸಹ್ಯಾದ್ರಿ ಪರ್ವತಕ್ಕೆ ಬಂದು ಶ್ರೀ ಕೃಷ್ಣನನ್ನು ಕುರಿತು ತಪಸ್ಸು ಮಾಡುತ್ತಾ ಇರಲು ಶ್ರೀ ಕೃಷ್ಣರು ಉತ್ತರ ಗೋವರ್ಧನನ ಪರ್ವತದಿಂದ ಸಕಲ ಋಷಿಗಣ ಸಮೇತ ಬಂದು ಅಗಸ್ತ್ಯ ಮಹಾ ಋಷಿ ವರ್ಯರಿಗೆ ಪ್ರತ್ಯಕ್ಷವಾಗಿ ನಿನ್ನ ತಪಸ್ಸು ಸಿದ್ಧಿಸಿತು. ನಿನ್ನ ಮನೋಭಿಲಾಸೆಯನ್ನು ಕೋರಿಕೋ ಎಂಧು ಕೇಳಿದಾಗ ಮಹಾ ವರೇಣ್ಯರು ಧನ್ಯರಾಗಿ ಈ ಸಹ್ಯಾದ್ರಿಯ ಆಗ್ನೇಯದಲ್ಲಿರುವ ಕಮಲಾಚಲ ಪರ್ವತಕ್ಕೆ ಅಂದರೆ ದಕ್ಷಿಣ ಗೋವರ್ಧನಗಿರಿಯಲ್ಲಿ ನೆಲೆಸಿ ಕಲಿಯುಗದಲ್ಲಿ ಸಕಲ ಜನರನ್ನು ಸಂರಕ್ಷಿಸಬೇಕೆಂದು ಪ್ರಾರ್ಥಿಸಲಾಗಿ ಆಗ ಸ್ವಾಮಿಯು ಕೋರಿಕೆಯನ್ನು ಒಪ್ಪಿ ಮೂರು ಷರತ್ತುಗಳನ್ನು ಹಾಕುತ್ತಾರೆ.

ಒಂದನೆಯದಾಗಿ ಯಾವಗಾಗಲೂ ಹಿಮದಿಂದ ಕೂಡಿರಬೇಕು.
ಎರಡನೆಯದಾಗಿ ಸಕುಟುಂಬವಾಗಿ ನೆಲೆಸಲು ಅವಕಾಶವಾಗಬೇಕು.
ಮೂರನೆಯದಾಗಿ ಸಪ್ತ ಋಷಿಗಳಿಂದ ಪೂಜೆಯಾಗಬೇಕು.

ಈ ಷರತ್ತುಗಳಿಗೆ ಒಪ್ಪಿ ಅಗಸ್ತ್ಯ ಮಹಾ ಋಷುವರ್ಯರು ಕಮಲಾದ್ರಿಗೆ ಸ್ವಾಮಿಯನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಿದರು. ಸಕಲವಾದ ತೀರ್ಥ ಸಕಲವಾದ ಋಷಿಗಳೊಂದಿಗೆ ವಾಸ ಮಾಡಿಕೊಂಡು ಸ್ವಾಮಿಯ ಆರಾಧನೆ ಮಾಡಿಕೊಂಡಿದ್ದರು. ಸ್ವಾಮಿಯ ಕೋರಿಕೆಯಂತೆ ಈಗಲೂ ಕೂಡ ವಿಗ್ರಹದ ಶಿರೋಭಾಗದಲ್ಲಿ ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುತ್ತದೆ.

ಒಂದೇ ಕೃಷ್ಣಶಿಲೆಯಲ್ಲಿ ಸಕುಟುಂಬವಾಗಿ ಅಂದರೆ ರುಕ್ಮಿಣಿ ಸತ್ಯಭಾಮ, ಗೋವುಗಳು, ಗೋಪಿಕಾ ಸ್ತ್ರೀಯರು, ಕೃಷ್ಣನ ಸ್ನೇಹಿತ ಮಕರಂದ ಮಂದಹಾರ (ಸುರವನ್ಯ) ವೃಕ್ಷದ ಕೆಳಗೆ ತ್ರಿಭಂಗಿಯಲ್ಲಿ ಇರುವ ಹಾಗೆ ಸ್ವಾಮಿಯ ವಿಗ್ರಹವಿದೆ. ಪ್ರತಿನಿತ್ಯವೂ ಸಪ್ತರ್ಷಿಗಳು ಅಗೋಚರವಾಗಿ ಪೂಜೆ ಸಲ್ಲಿಸುತ್ತಿರುವ ಅನುಭವವಾಗುತ್ತದೆ.

ಬೆಂಗಳೂರು-ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳಿ ಅಲ್ಲಿಂದ ಮುಂದಕ್ಕೆ ಕೇವಲ 22 ಕಿ.ಮೀ. ಬಂಡೀಪುರದಿಂದ 10 ಕಿ.ಮೀ. ಚಲಿಸಿದರೆ ಬೆಟ್ಟಕ್ಕೆ ಸಾಗಬಹುದು.

ಪುರಾಣದಲ್ಲಿ ದಕ್ಷಿಣ ಗೋವರ್ಧನಗಿರಿಯೆಂದು ಕಮಲಾಚವೆಂದು ಕರೆಯಲ್ಪಡುತ್ತಿದ್ದು, ಗುಂಡ್ಲುಪೇಟೆಯಿಂದ 22 ಕಿ.ಮೀ ದೂರದಲ್ಲಿದ್ದು, ಸಮುದ್ರಮಟ್ಟದಿಂದ 4,770 ಅಡಿ ಎತ್ರದಲ್ಲಿದ್ದು, ಮನಮೋಹಕ ದೃಶ್ಯದಿಂದ ಕೂಡಿರುತ್ತದೆ. ಈ ದೇವಸ್ಥಾನ ಉತ್ತರಾಭಿಮುಖವಾಗಿದ್ದು, ಹೊಯ್ಸಳರ ಕಾಲದಲ್ಲಿ ಅಂದರೆ 1315ನೇ ವರ್ಷದಲ್ಲಿ ಪ್ರತಿಷ್ಠಾಪನೆ ಗೊಂಡಿರುತ್ತದೆ, ಈ ಸ್ವಾಮಿಯು 6 ಅಡಿ ಎತ್ತರವಿದ್ದು, ಕೊಳಲನೂದುವ ಮೂಲ ಭಂಗಿಯಲ್ಲಿರುತ್ತದೆ.

ಶ್ರೀಯವರ ಬ್ರಹ್ಮ ರಥೋತ್ಸವವು ಪ್ರತಿವರ್ಷ ಪಾಲ್ಗುಣ ಮಾಸದ ಶ್ರವಣ ನಕ್ಷತ್ರದಂದು  ರಥೋತ್ಸವದ ಜರುಗಿದೆ (2-4-2016)(ಇಂದು) ವಿಶೇಷವೇನೆಂದರೆ ಸಮೀಪದ ಕಾಡಿನಿಂದ ದೊರಕುವ ಬೊಂಬುಗಳಿಂದ ರಥವನ್ನು ಕಟ್ಟಿ, ಹಂಬುಗಳಿಂದ ರಥವನ್ನು ಎಳೆಯಲಾಗುತ್ತದೆ. ಇದು ಈ ಸ್ಥಳದ ವಿಶೇಷ.

ಪ್ರತಿ ವರ್ಷ ಬರುವ ಶ್ರಾವಣ ಮಾಸದ ದಿನಗಳು ವಿಶೇಷ ದಿನಗಳಾಗಿದ್ದು, ಸದರಿ ಮಾಸದ ಶನಿವಾರಗಳಲ್ಲಿ ಸ್ವಾಮಿಯವರಿಗೆ ವಿಶೇಷ ಪೂಜಾದಿ ಕ್ರಮಗಳು ನಡೆಯುತ್ತದೆ. ಸದರಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸ್ವಾಮಿಯವರ ದರ್ಶನಪಡೆದು ಪುನೀತರಾಗುವುದು ವಿಶೇಷವಾಗಿರುತ್ತದೆ. ಸದರಿ ಮಾಸದಲ್ಲಿ ಹಿಮದಿಂದ ಆವರಿಸಿ ಭಕ್ತಾದಿಗಳಿಗೆ ಹೆಚ್ಚಿನ ಸಂತೋಷ ಹಾಗೂ ಭಕ್ತಿಭಾವಗಳಿಂದ ತುಂಬಿರುವುದು ಈ ಕ್ಷೇತ್ರದ ವಿಶೇಷತೆಯಾಗಿರುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ