ಅದ್ವೈತ ತತ್ತ್ವಾಮೃತ

    ಕ್ರಿ.ಶ ಏಳನೆಯ ಶತಮಾನದಲ್ಲಿ ಅವತಾರವೆತ್ತಿದ ಶ್ರೀ ಶಂಕರಾಚಾರ್ಯರು, ಉಪನಿಷತ್ತುಗಳಿಂದ ಸ್ಫುರಿಸಿದ ಅದ್ವೈತತತ್ತ್ವಕ್ಕೆ ಒಂದು ಹೊಸ ರೂಪವನ್ನು ಕೊಟ್ಟರು. ಅವರು ಭಾರತಾದ್ಯಂತ ಸಂಚರಿಸಿ ತಾವು ಕಂಡುಕೊಂಡ ಅದ್ವೈತಮತವನ್ನು ಇತರರಿಗೂ ಹಂಚಿಕೊಟ್ಟು ಜೀವನ ಸಾರ್ಥಕತೆಯ ದಾರಿಯನ್ನು ತೋರಿಸಿಕೊಟ್ಟರು. ಇಂದಿಗೂ ಅದೇ ಪರಪಂರೆಯನ್ನು ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾ ಸ್ವಾಮಿಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅದ್ವೈತ ತತ್ತ್ವವನ್ನು ಸಂಗ್ರಹವಾಗಿ ಹೀಗೆ ಹೇಳುವುದುಂಟು.

ಬ್ರಹ್ಮಸತ್ಯಂಜಗನ್ಮಿಥ್ಯಾ ಜೀವೋಬ್ರಹೈವ ನಾಪರಃ ||

    ಅಂದರೆ ಬ್ರಹ್ಮ ಒಂದೇ ಸತ್ಯ, ಜಗದಧಿಷ್ಠಾನನು, ಜಗತ್ತು ಮಿಥ್ಯಾ(ಸುಳ್ಳು). ಭ್ರಾಂತಿ ಹೋದ ಮೇಲೆ ಜೀವ ಬ್ರಹ್ಮರಲ್ಲಿ ಅಭೇದವು.
    ಉಪನಿಷತ್ತುಗಳಿಂದ ಸ್ಫುರಿಸಿದ ಅದ್ವೈತತತ್ತ್ವವನ್ನು ಶ್ರೀ ಶಂಕರರು ತಮ್ಮ "ಬ್ರಹ್ಮಸೂತ್ರಭಾಷ್ಯದಲ್ಲಿ" ಸೋದಾಹರಣವಾಗಿ ಚರ್ಚಿಸಿದ್ದಾರೆ.
    "ಬ್ರಹ್ಮಸೂತ್ರಭಾಷ್ಯ" ಎಂಬ ವಾಕ್ಯದಲ್ಲಿ ಮೂರು ಪದಗಳಿದ್ದು ಮೊದಲು ಅವುಗಳ ಸ್ಥೂಲಾರ್ಥ ತಿಳಿಯಲು ಪ್ರಯತ್ನಿಸೋಣ.

    ಮೊದಲು "ಭಾಷ್ಯ" ಎಂದರೇನು ಎಂದು ತಿಳಿಯೋಣ :-
ಭಾಷ್ಯವೆಂದರೆ :-
    "ಸೂತ್ರಾರ್ಥೋ ವರ್ಣ್ಯತೇ ಯತ್ರ ಪದೈಸ್ಸೂತ್ರಾನುಕಾರಿಭಿಃ
    ಸ್ವಪದಾನಿ ಚ ವರ್ಣ್ಯಂತೇ ಭಾಷ್ಯಂ ಭಾಷ್ಯವಿದೋವಿದುಃ ||"

    ಅಂದರೆ ಸೂತ್ರಾನುಕಾರಿಪದಗಳನ್ನೇ ಉಪಯೋಗಿಸಿ ಸೂತ್ರಾರ್ಥಗಳನ್ನು ಅರಹುತ್ತಾ ಗಂಭೀರಾರ್ಥಕ ಸ್ವಪದಗಳನ್ನೂ ವಿವರಿಸುವುದು ಭಾಷ್ಯಲಕ್ಷಣವೆಂದು ತಜ್ಞರು ಹೇಳುತ್ತಾರೆ.
    ಇಂತಹ ಭಾಷ್ಯ ಲಕ್ಷಣದಿಂದ ಪೂರ್ಣಯುಕ್ತವಾದ ಭಾಷ್ಯವೆಂದರೆ, ಶ್ರೀ ಶಂಕರರ ಭಾಷ್ಯವೇ ಎಂಬುದು ನಿರ್ಮತ್ಸರೋಕ್ತಿ ಎಂದರೆ ತಪ್ಪಾಗಲಾರದು.

ಸೂತ್ರಗಳೆಂದರೆ :-
    "ಅಲ್ಪಾಕ್ಷರಮಸಂದಿಗ್ಧಂ ಸಾರವದ್ವಿತ್ವತೋಮುಖಮ್
    ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋವಿದುಃ ||"

    ವ್ಯರ್ಥಾಕ್ಷರಗಳಿಲ್ಲದೇ, ಮಿತಾಕ್ಷರಗಳಿಂದೊಡಗೂಡಿ ಬಹುವಿಷಯ ನಿರ್ಣಾಯಕವಾಗಿ, ಇತರ ಪ್ರಮಾಣಗಳಿಂದ ಅಲಭ್ಯವಾದ ಅರ್ಥಗಳನ್ನು ಜ್ಞಾಪಿಸುವವುಗಳಾಗಿ ಬಹುಶಾಖಾನಿರ್ಣಾಯಕಗಳಾದ ವಾಕ್ಯಗಳು.

    ಸೂತ್ರಗಳು ಬಹುಶಾಖಾನಿರ್ಣಾಯಕಗಳಾಗಿ, ಅನೇಕಾರ್ಥದಿಂದ ಗಂಭೀರವಾದವುಗಳಾಗಿರುವುದರಿಂದ, ಅಧ್ಯಾಹಾರಪದಗಳಿಂದಲೇ ಪೂರ್ಣಾರ್ಥಕಗಳಾಗಿರುವುದರಿಂದ ಭಾಷಾಪೇಕ್ಷೆಯು ಅಗತ್ಯವೇ ಆಗಿರುವುದು.

    ಇನ್ನು ಮೊದಲನೆಯ ಪದವಾದ ಬ್ರಹ್ಮ ವಿವರಿಸುವುದು ಕಷ್ಟ ಆದರೆ ಸ್ಥೂಲವಾಗಿ, ಉಪನಿಷತ್ತುಗಳಿಂದ ತಿಳಿಯಲವಕಾಶವಿದೆ ಯಾವುದನ್ನು ಮನಸ್ಸಿನಿಂದ ತಿಳಿಯಲಾಗದೋ ಯಾವುದರಿಂದಲೇ ಮನಸ್ಸು ತಿಳಿಯಲ್ಪಡುತ್ತಿದೆಯೋ ಅದನ್ನೇ ನೀನು "ಬ್ರಹ್ಮ"ವೆಂದು ತಿಳಿ ಎನ್ನುತ್ತದೆ ಕೇನೋಪನಿಷತ್. "ತಪಸಾ ಬ್ರಹ್ಮ ವಿಜಿಜ್ಞಾಸಸ್ವ - ತಪೋಬ್ರಹ್ಮೇತಿ" ಎನ್ನುತ್ತದೆ ತೈತ್ತಿರೀಯೋಪನಿಷತ್ ಅಂದರೆ ತಪಸ್ಸಿನಿಂದ ಬ್ರಹ್ಮವನ್ನು ಅರಿಯುವವನಾಗು ತಪಸ್ಸೇ ಬ್ರಹ್ಮವು. ಬ್ರಹ್ಮಾತ್ಮಕಂ ಜಗತ್" ಎಂದು ಪ್ರಶ್ನೋಪನಿಷತ್ತು ಸಾರುತ್ತಿದೆ "ಸರ್ವಂ ಖಲ್ವಿದಂ ಬ್ರಹ್ಮ" ಎಂದು ಛಾಂದೋಗ್ಯೋಪನಿಷತ್ ತಿಳಿಸುತ್ತದೆ.

    ಇಂತಹ ಬ್ರಹ್ಮವಿದ್ಯೆಗೆ ಮೂರು ಸಾಧನಗಳು, ಶ್ರದ್ಧಾ, ಭಕ್ತಿ, ಧ್ಯಾನಯೋಗ ಬೇಕು ಎನ್ನತ್ತದೆ ಕೈಮಲ್ಯೋಪನಿಷತ್ ಈ ಪದಗಳ ಸ್ಥೂಲಾರ್ಥ ಇಂತಿದೆ :-

    ಶ್ರದ್ಧಾ : ಸದ್ಗುರು ಮತ್ತು ಶಾಸ್ತ್ರವಾಕ್ಯಗಳಲ್ಲಿ ಇರುವ ವಿಶ್ವಾಸವೇ ಶ್ರದ್ಧೆಯು ಸದ್ಗುರುಗಳ ಉಪದೇಶದಲ್ಲಿ ನಮಗೆ ಸಂಪೂರ್ಣ ವಿಶ್ವಾಸವು ಇರಬೇಕು, ವೇದಾಂತ ಶಾಸ್ತ್ರದ ಸಂದೇಶದಲ್ಲಿಯೂ ನಮಗೆ ಸಂಪೂರ್ಣ ವಿಶ್ವಾಸವು ಇರಬೇಕು, ವೇದಾಂತ ಶಾಸ್ತ್ರದ ಸಂದೇಶದಲ್ಲಿಯೂ ನಮಗೆ ಅದರ, ಪ್ರೀತಿ, ವಿಶ್ವಾಸ ಇರಬೇಕು.

    ಭಕ್ತಿ : ಪರಮಾತ್ಮನಲ್ಲಿಯೂ ಸದ್ಗುರುಗಳಲ್ಲಿಯೂ ನಮಗೆ ಹೆಚ್ಚಿನ ಗೌರವಗಳಿರಬೇಕು. ಸದ್ಗುರುಗಳಲ್ಲಿ ಭಕ್ತಿಯಿಲ್ಲದವನಿಗೆ ಆತ್ಮಜ್ಞಾನವು ಖಂಡಿತಾ ದಕ್ಕಲಾರದು ಗುರುಸೇವೆ ಮತ್ತು ಗುರುಭಕ್ತಿಯು ಜ್ಞಾನಪ್ರಾಪ್ತಿಗೆ ಮುಖ್ಯವಾದ ಸಾಧನವು.

    ಧ್ಯಾನಯೋಗ : ಚಿತ್ತಶುದ್ಧಿಯಿಂದ ಮಾತ್ರವೇ ಆತ್ಮನ ಜ್ಞಾನವು ಉಂಟಾಗುತ್ತದೆಯೇ ಹೊರತು ಬರೀ ಪಾಂಡಿತ್ಯದಿಂದಲ್ಲ ಅಂತರ್ಮುಖನಾಗಿ ಆತ್ಮನನ್ನು ಚಿಂತಿಸುವುದೇ ಧ್ಯಾನಯೋಗವು. ಹೀಗೆ ಈ ಮೂರು ಸಾಧನಗಳಿಂದ ಬ್ರಹ್ಮವನ್ನು ಅರಿತುಕೊಂಡಾಗ ಪ್ರತಿಯೊಂದು ವಸ್ತುವಿನಲ್ಲಿಯೂ ಬ್ರಹ್ಮವನ್ನು ಕಾಣುತ್ತಾನೆ ಹೀಗೆ ಅದ್ವೈತದಿಂದ ನಮ್ಮ ಪ್ರತಿಯೊಂದು ವಿಚಾರ, ಭಾವನೆ, ಚಲನವಲನಗಳು ಸಹಜವಾಗಿ ಉದಾತ್ತಗೊಳ್ಳುವವು ಅವಗಳಲ್ಲಿ ವಿಶ್ವಪ್ರೇಮವು ಉಕ್ಕೇರುವುದು ಲೋಕ ಕಲ್ಯಾಣದ ಪ್ರೇರಣೆ ಪುಟಿದೇಳುವುದು.

    ಸ್ವಾರ್ಥದ ಸ್ಥಳದಲ್ಲಿ ತ್ಯಾಗ, ಶೋಷಣೆಯ ಸ್ಥಳದಲ್ಲಿ ಸೇವೆ, ಘರ್ಷಣೆಯ ಸ್ಥಳದಲ್ಲಿ ಸಹಕಾರ, ಭೇದವಿದ್ದಲ್ಲಿ ಏಕತೆ ಮೂಡಿಬರುವುವು ಈ ಲೋಕದ ಬದುಕು ಸುಖಸಮೃದ್ಧಿಗಳಿಂದ ಸಾಮರಸ್ಯಗಳಿಂದ ಕೂಡಿ ಆನಂದಮಯವಾಗುವುದು. ಜೀವನವು ಸಚ್ಚಿದಾನಂದಮಯವಾಗುವುದು.

ಶ್ರೀ ಶಂಕರರ ಅದ್ವೈತತತ್ತ್ವಾಮೃತ ಪಾನಮಾಡಿ ಧನ್ಯರಾಗೋಣ.
(ಸಂಗ್ರಹ - ವಿವಿಧ ಮೂಲಗಳಿಂದ)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ